ಊದಿ
	ಮಧ್ಯಪ್ರಮಾಣದ, ಹರಡಿದ ಹಂದರದ, ದಪ್ಪ ಕೊಂಬೆಗಳ, ಪರ್ಣಪಾತಿ ಮರ (ಒಡೈನಾ ವೊಡಿರ್). ಗುಗುಲ್ ಎಂದೂ ಹೆಸರು. ಅನಕಾರ್ಡಿಯೇಸಿ ಕುಟುಂಬಕ್ಕೆ ಸೇರಿದೆ. ತೊಗಟೆ ಮಂದ ಬೂದು ಬಣ್ಣದಿಂದ ಕೂಡಿದೆ. ಅಸಮರೂಪಕ ಹೊಪ್ಪಳಿಕೆಗಳಿವೆ. ಒಳಮೊಗ ಕಿರುಗೆಂಪು. ಭಾರತದ ಕಾಡುಗಳಲ್ಲಿ ಇದರ ವ್ಯಾಪನೆಯಿದೆ. ಡಿಸೆಂಬರಿನಿಂದ ಜೂನ್‍ವರೆಗೆ ದೀರ್ಘಕಾಲ ಎಲೆಯಿಲ್ಲದೆ ಮರ ಬೋಳಾಗಿರುವುದು. ಮಾರ್ಚ್-ಏಪ್ರಿಲ್‍ನಲ್ಲಿ ಹೂಗಳು ಮೂಡಿ, ಮೇ-ಜೂನ್ ತಿಂಗಳಲ್ಲಿ ಕಾಯಿಗಳು ಮಾಗುವುವು. ಚೌಬೀನೆಯ ಕೆಚ್ಚು ಕುಯ್ದ ಹೊಸದರಲ್ಲಿ ಎಳೆಗೆಂಪಿನಿಂದಿದ್ದು ಕ್ರಮೇಣ ಕಪ್ಪುಛಾಯೆ ಹೊಂದಿ, ಹಲಗೆಗಳಿಗೆ, ವ್ಯವಸಾಯ ಉಪಕರಣಗಳಿಗೆ ಉಪಯುಕ್ತವಾಗಿರುವುದು. ತೊಗಟೆಯಿಂದ ಬರುವ ಅಂಟನ್ನು ಔಷಧಿಗೆ ಬಳಸುತ್ತಾರೆ.				
	(ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ